DIPR Chitradurga News
ಕುಷ್ಟರೋಗಕ್ಕೆ ನಿಗದಿತ ಚಿಕಿತ್ಸೆ ಇದೆ, ಭಯಪಡುವ ಅಗತ್ಯ ಇಲ್ಲ - ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್
******
ಚಿತ್ರದುರ್ಗ(ಕರ್ನಾಟಕ ವಾರ್ತೆ)ನ.03:
ಕುಷ್ಟರೋಗವು ಶಾಪದಿಂದ, ಪಾಪದಿಂದ ಬರುವ ರೋಗವಲ್ಲ. ಮೈಕೋ ಬ್ಯಾಕ್ಟೀರಿಯಮ್ ಲೆಪ್ರೇ ಎಂಬ ಸೂಕ್ಷ್ಮಾಣು ಜೀವಿ ಬ್ಯಾಕ್ಟೀರಿಯಾದಿಂದ ನಿಧಾನವಾಗಿ ಬರುವ ಒಂದು ಸಾಂಕ್ರಾಮಿಕ ರೋಗ. ಈ ರೋಗಕ್ಕೆ ನಿಗದಿತ ಚಿಕಿತ್ಸೆ ಇದೆ. ಭಯಪಡುವ ಅಗತ್ಯ ಇಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ತಿಳಿಸಿದರು.
ಇಲ್ಲಿನ ಬುದ್ಧನಗರ ಆರೋಗ್ಯ ಕೇಂದ್ರ ಆವರಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಕುಷ್ಟರೋಗ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ಕುಷ್ಟ ರೋಗ ಪತ್ತೆ ಹಚ್ಚುವ ಅಭಿಯಾನದಲ್ಲಿ ಪಾಲ್ಗೊಂಡು ಹಸಿರು ನಿಶಾನೆ ತೋರಿಸುವ ಮುಖಾಂತರ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು .
ದೇಹದ ಯಾವುದೇ ಭಾಗದಲ್ಲಿ ಚರ್ಮದ ಮೇಲೆ ತಿಳಿ ಬಿಳಿ ಅಥವಾ ತಾಮ್ರ ವರ್ಣದ ಸ್ಪರ್ಶಜ್ಞಾನವಿಲ್ಲದ ಮಚ್ಚೆಗಳು, ಮಚ್ಚೆಗಳ ಮೇಲೆ ತಂಪು ಬಿಸಿಯ ಅನುಭವ ಇರುವುದಿಲ್ಲ, ಕೈಕಾಲುಗಳಲ್ಲಿ ಜೋಮು, ಮುಖದ ಮೇಲೆ ಎಣ್ಣೆ ಸವರಿದಂತೆ ಹೊಳಪು, ನಡೆಯುವಾಗ ಕಾಲು ಎಳೆಯುವುದು, ಕುಷ್ಟರೋಗದ ಲಕ್ಷಣಗಳಿರಬಹುದು. ಮಚ್ಚೆಗಳನ್ನು ಇಚ್ಛೆಯಿಂದ ಮುಚ್ಚಿಟ್ಟರೆ ಅಂಗವಿಕಲತೆ ಬರುವ ಸಾಧ್ಯತೆಯಿದ್ದು, ಸಾರ್ವಜನಿಕರು ಸ್ವ ಇಚ್ಛೆಯಿಂದ ಸರ್ಕಾರಿ ಆಸ್ಪತ್ರೆ ವೈದ್ಯರಲ್ಲಿ ಪರೀಕ್ಷೆಗೆ ಒಳಪಡಬೇಕು. ರೋಗ ದೃಢಪಟ್ಟರೆ ಉಚಿತವಾಗಿ ಮನೆ ಬಾಗಿಲಿಗೆ ಔಷಧಿ ಒದಗಿಸಲಾಗುವುದು. ರೋಗಿಯು ಆಸ್ಪತ್ರೆಯಲ್ಲಿ ದಾಖಲಾಗುವ ಅವಶ್ಯಕತೆ ಇರುವುದಿಲ್ಲ. ರೋಗಲಕ್ಷಣಗಳಿಗನುಸಾರ ಆರು ತಿಂಗಳಿಂದ ಒಂದು ವರ್ಷದೊಳಗೆ ಚಿಕಿತ್ಸೆ ಪಡೆದರೆ ಕುಷ್ಟರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಬನ್ನಿ ಎಲ್ಲರೂ “ಭಾರತವನ್ನು ಕುಷ್ಟರೋಗ ಮುಕ್ತ ಮಾಡಲು ಪ್ರಯತ್ನ ಮಾಡೋಣ’ ಎಂದರು.
ಕಾರ್ಯಕ್ರಮ ಅನುμÁ್ಠನಾಧಿಕಾರಿ ಡಾ.ಜಿ.ಓ.ನಾಗರಾಜ್ ಮಾತನಾಡಿ, ಕುಷ್ಟರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನ ಇದೇ ನವೆಂಬರ್ 3 ರಿಂದ 19 ರವರೆಗೆ ಚಿತ್ರದುರ್ಗ ಜಿಲ್ಲೆಯ ಆಯ್ದ 179 ಗ್ರಾಮಗಳಲ್ಲಿ ಮೂರು ನಗರ ಪ್ರದೇಶ ಒಳಗೊಂಡಂತೆ 2,97,445 ಜನಸಂಖ್ಯೆ ಮತ್ತು 67535 ಮನೆಗಳು ಸಮೀಕ್ಷೆಗೆ ಒಳಪಟ್ಟಿದ್ದು, 14 ದಿನ ಕುಷ್ಟರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ ನಡೆಯಲಿದೆ. 235 ತಂಡಗಳನ್ನು ರಚಿಸಿದ್ದು, ಒಂದು ತಂಡದಲ್ಲಿ ಒಬ್ಬ ಆಶಾ ಕಾರ್ಯಕರ್ತೆ ಮತ್ತು ಪುರುಷ ಸ್ವಯಂಸೇವಕರಿದು,್ದ 10 ತಂಡಕ್ಕೆ ಒಬ್ಬರು ಮೇಲ್ವಿಚಾರಕರಂತೆ 23 ಜನ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ತಮ್ಮ ಮನೆಗಳಿಗೆ ಭೇಟಿ ನೀಡಿದ ಸಿಬ್ಬಂದಿಯವರಿಗೆ ಸಹಕರಿಸುವುದರ ಜೊತೆಗೆ ಕುಷ್ಟರೋಗದ ಪರೀಕ್ಷೆಗೆ ಒಳಪಡಬೇಕು ಎಂದರು.
ಜಾಥಾ ಕಾರ್ಯಕ್ರಮ ಬುದ್ಧನಗರ ಆರೋಗ್ಯ ಕೇಂದ್ರ ಆವರಣದಿಂದ ಪ್ರಾರಂಭಗೊಂಡು ರಾಜೇಂದ್ರ ನಗರ ಮುಖ್ಯ ರಸ್ತೆ, ಅಂಬೇಡ್ಕರ್ ಕಲ್ಯಾಣ ಮಂಟಪದ ಮೂಲಕ ಜಟ್‍ಪಟ್ ನಗರ ಸರ್ಕಲ್, ತಿಪ್ಪಿನ ಘಟ್ಟಮ್ಮ ದೇವಸ್ಥಾನದ ಮಾರ್ಗವಾಗಿ, ಒನಕೆ ಓಬವ್ವ ವೃತ್ತ ಕ್ರೀಡಾಂಗಣ ಮುಂಭಾಗದಲ್ಲಿ ಅಂತ್ಯಗೊಂಡಿತು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ "ಕುಷ್ಟರೋಗ ಶಾಪವೂ ಅಲ್ಲ ಪಾಪವು ಅಲ್ಲ" "ಅನುವಂಶಿಯತೆಯಿಂದ ಬರುವ ರೋಗವಲ್ಲ" "ಚಿಕಿತ್ಸೆಗೆ ತಾತ್ಸಾರ ಮಾಡಿದರೆ ಅಂಗವಿಕಲತೆ ಬರಬಹುದು" "ಕೈ ಕೈ ಜೋಡಿಸಿ ಕುಷ್ಟರೋಗ ನಿವಾರಿಸಿ" ಎಂಬ ಘೋಷಣೆಗಳನ್ನು ಹಾಕಿಸಿದರು.
ಕಾರ್ಯಕ್ರಮದಲ್ಲಿ ಬುದ್ಧನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುರೇಂದ್ರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್ ಮತ್ತು ಸಿಬ್ಬಂದಿ ವರ್ಗದವರು ಡಿ ಎನ್ ಟಿ ತಂಡದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಚಂದ್ರಪ್ಪ, ಮಂಜುನಾಥ, ಓಂಕಾರ ಸ್ವಾಮಿ, ರಾಜೇಂದ್ರ ಪ್ರಸಾದ್, ಕಿರಣ್, ಹನುಮಂತಪ್ಪ, ಪ್ರವೀಣ್ ಕುಮಾರ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ಆಶಾ ಕಾರ್ಯಕರ್ತರು. ವಿವಿಧ ವೃಂದದ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
(ಫೋಟೋ ಕಳುಹಿಸಿದೆ)
